ಕನಸ ವಾಸ್ತವ

ಕುಳಿತರಲ್ಲಿ ಚನ್ನ ಚನ್ನೆಯರು
ಬರುವವು ಕಥನಗಳ ಸಾಲು ನೂರಾರು
ಸಡಗರ – ಸಂಕಟಗಳ ಸರಮಾಲೆ,ತುಂತುರು

ಎಂತೆಂಥವೊ ಕನಸುಗಳು
ಎನಿತು ಚಂದವು ಎನಿಸಿ
ನೆನೆದೊಡನೆ ಮನವ ಪುಳಕಗೊಳಿಸಿ
ಸಂಚಯಿಸಿ ಮನದೊಡಲಲಿ ಭದ್ರಗೊಳಿಸಿರಲು
ಎರಗಿತೋ ಎದೆಯನೆ ಸೀಳ್ದ ಭರಸಿಡಿಲು
ಎಲ್ಲವ ಇಲ್ಲವನಾಗಿಸಿ
ಮಾನಸಸರೋವರವನೆ ಬರಡಾಗಿಸಿ

ಕ್ಷಣಕು ಮುನ್ನ ಕನಸಲೋಕದಲೆ ವಿಹಾರ
ಈಗ ನಿಂತ ನಿಲುವೆ ಕುಸಿಯುತಿರೆ ಇಲ್ಲವೂ ಆಧಾರ
ಮುಂದಡಿಯಿಡಲೆಜ್ಜೆಗೂ ಆತಂಕದ ಪಾಷ
ಮುಚ್ಚಿರಲು ದ್ವಾರಗಳು ಅವಕಾಶ ನಿಶ್ಶೇಷ

ಮುಂದೇನು ಕೇಡೇ ಕಾಲ್ಗೆಜ್ಜೆ ಕಟ್ಟಿರಲು
ಕುಣಿತವದರದೆ ಇನ್ನು ಕೆಡೆ ಮತಿಯ ಕಂದೀಲು
ಬಾಳಬಹುದೆ ಬೇಯುತಿಹ ಕಾನನದೊಳು ಪತಂಗ
ಕ್ಷಣ-ಕ್ಷಣಕು ನಿಚ್ಚಳವಾಗುತಿರೆ ಮರಣ ಮೃದಂಗ

ಎಚ್ಚರ-ಎಚ್ಚರ ದಿಗ್ಗನೆ ಅಚ್ಚರಿಯ ಬೆಳಕಾಯ್ತು
ಕನಸೊಳು ಕನಸ ಕಂಡದ್ದು ಅರಿವಾಯ್ತು
ಕಾಣ್ದ ಕನಸನೆ ಮರುನೆನೆಯಲು ಭಯವಾಗಿ
ಒಡಲೊಳಗಣ ಕೊಕೊಳ್ಳಿ ತಣಿವಾಗಿ ಕರಗಿ
ಬಡಬಡಿಸಿದ ಹೃದಯ ಲಯವಿಡಿದು ಸುಧಾರಿಸಿ
ಗೆಲುವಾಯ್ತು ಜೀವ ಹೊಸಚಿಲುಮೆ ಪಸರಿಸಿ

ಅಪ್ಪಿದಳು ಚನ್ನೆ ಚನ್ನನ ತನಮನದನ್ನನ
ಅರುಹುತಲಿ ತನ್ನನುಭವವನ ಬಿಗಿಗೊಳಿಸಿ ತೊಳ್ಬಂಧನ
ತುಸು ನಗೆ ಬೀರುತಲೆ ಚನ್ನ ಸರಿಸಿ ಮುಂಗುರುಳ
ಮುತ್ತಿಡುತ ಹಣೆಯತ್ತ ಸಮಾದಾನಿಸಿದನವಳ

ಬರಿ ಕನಸೆ ಇರಬಹುದು ಕೆಲವರಿಗೆ ಇದು
ಬಹಳರಿಗೆ ಆ ಘೋರ ವಾಸ್ತವವೆ ಒದಗಿಹುದು
ಆಶಿಸುತ ಅವರ ಸ್ಥಿತಿ ಸುಧಾರಿಸಲಿ
ಸಾಧ್ಯವಿರೆ ಅದು ಚನ್ನೆಯ ಕನಸಾಗಲಿ